ಅರಕಾನ್ ಕರಾವಳಿ
	ಬಂಗಾಳ ಕೊಲ್ಲಿಗೆ ಎದುರಾಗಿರುವ ಬರ್ಮದ ತೀರಪ್ರದೇಶ. ಇದು ಮುಳುಗಿರುವ ಅನೇಕ ಕಣಿವೆಗಳು, ಆಳವಾದ ಖಾರಿಗಳು, ಮೆಕ್ಕಲುಮಣ್ಣಿನ ನದೀಮುಖಗಳು, ತೀರಕ್ಕೆ ದೂರವಾಗಿರುವ ದ್ವೀಪಗಳು-ಇವನ್ನು ಒಳಗೊಂಡಿರುವ ಕಲ್ಲುಬಂಡೆಯ ಪ್ರದೇಶ. ಈ ದ್ವೀಪಗಳು ಒಂದಾನೊಂದು ಕಾಲದಲ್ಲಿ ಅಕ್ಯಾಬ್‍ನಿಂದ ಆಗ್ನೇಯ ದಿಕ್ಕಿನಲ್ಲಿ ವಿಸ್ತರಿಸಿದ್ದು ಅನಂತರ ಉಂಟಾದ ಭೂಪಲ್ಲಟದಿಂದ ಅಳಿದು ಉಳಿದಿರುವ ಅವಶೇಷಗಳು. ಅರಕಾನ್ ತೀರದ ಉದ್ದಕ್ಕೂ ಚಿಕ್ಕ ಚಿಕ್ಕ ಶಂಕುವಿನಾಕೃತಿಯ ಒಣಮಣ್ಣಿನ ದಿಣ್ಣೆಗಳು ಇವೆ; ಇವು ಜಲಜನಕ ಮತ್ತು ಇಂಗಾಲ ಸಂಯುಕ್ತ ಅನಿಲವನ್ನು ಹೊರಬಿಡುತ್ತಿರುತ್ತವೆ. ಇವುಗಳನ್ನು ಮಣ್ಣಿನ ಅಗ್ನಿಪರ್ವತಗಳೆಂದು ಕರೆಯುತ್ತಾರೆ. ಇವು (300') ಎತ್ತರವಾಗಿವೆ. ಇವುಗಳಲ್ಲಿ ಸಾಮಾನ್ಯವಾಗಿ ಸಾಧಾರಣವಾದ ಜಲಪ್ರವಾಹ ಕಂಡುಬಂದು ಆಗಾಗ್ಗೆ ಸ್ಫೋಟಗಳಾಗುತ್ತಿರುತ್ತವೆ. ಈ ಮಣ್ಣಿನ ಅಗ್ನಿಪರ್ವತಗಳಿಂದ ಹೊರಬಂದ ಅನಿಲ ಪೆಟ್ರೋಲಿಯಂನ ಗುಣಲಕ್ಷಣಗಳನ್ನು ಹೊಂದಿದೆ. ಬರ್ಮದಲ್ಲಿ ದೊರೆಯುವ ಅಲ್ಪಪ್ರಮಾಣದ ಪೆಟ್ರೋಲಿಯಂ ಇವುಗಳಿಂದ ದೊರೆಯುತ್ತದೆ. ಇದರ ತೀರಪ್ರದೇಶ ಒಳದೇಶದ ಒಂದು ಸ್ವಾಭಾವಿಕ ವೈಲಕ್ಷಣ್ಯಕ್ಕೆ ಸಮಾನಾಂತರವಾಗಿದೆ. ಈ ತೀರದಲ್ಲಿ ಅಕ್ಯಾಬ್ ಒಂದು ಮುಖ್ಯ ಪಟ್ಟಣ.

(ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ